Monday, November 26, 2012

ಯಾಕೋ ಕಾಣೆ

   ಯಾಕೋ ಕಣೋ ರಾತ್ರಿಯೆಲ್ಲಾ ನಿಂದೇ ನೆನಪು. ಎಷ್ಟೇ ಹೊತ್ತಿಗೆ ಕನಸು ಬಿದ್ರೂ ನೀನೇ ಕಾಣಿಸ್ತೀಯ. ದೇವರ ಧ್ಯಾನ ಮಾಡ್ಲಿಕ್ಕೆ ಹೋದ್ರೂ ನೀನೇ ಮಾರಾಯಾ. ಅಬ್ಬಾ ಸ್ನಾನ ಮಾಡ್ಲಿಕ್ಕೂ ಬಿಡಲ್ವಲೋ ನೀನು. ನಂಗೆ ಎಷ್ಥು ಕಷ್ಥ ಆಗುತ್ತೆ ಗೊತ್ತಾ ?
   ನಿಂಗೊತ್ತಾ ಕಾಲೇಜು ಬೆಂಚಲ್ಲೂ ನಿಂದೇ ಹೆಸ್ರು ಕೆತ್ತಿ  ಇಟ್ಟಿದ್ದೀನಿ ಕಣೋ. ಕಾಲೇಜ್ನಲ್ಲಿ ಎಲ್ಲರ ಹತ್ರಾನೂ ನಿನ್ ವಿಷ್ಯ ಹೇಳಿದೀನಿ ಮಾರಾಯಾ. ಲೆಕ್ಚರ್ ಬಂದು ಕ್ಲಾಸ್ ಹೇಗೆ ಮಾಡ್ತಾರೆ ಅಂತಾನೇ ಗೊತ್ತಾಗೊಲ್ಲ ಕಣೋ. 
   ಆದ್ರೆ ಮೊಬೈಲ್ ನಲ್ಲಿ, ನೋಟ್ ಬುಕ್ ನಲ್ಲಿ ನಿನ್ ಹೆಸ್ರು ಗೀಚಕ್ಕೆ ಹೆದ್ರಿಕೆ ಆಯ್ತು ಕಣೋ. ಆದ್ರೂ ಬಿಡ್ಲಿಲ್ಲ ಬೇರೆ ಸ್ಟೈಲಲ್ಲಿ ಗೀಚಿಟ್ಟಿದ್ದೀನಿ. ಯಾರ್ಗೂ ಗೊತ್ತಾಗೊಲ್ಲ ಕಣೋ. 
    ಹೇಯ್ ! ಯಾಕೋ ಗೊತ್ತಿಲ್ಲ ಕಣೋ, ನೀನು ನಂಗೆ ಒಂಥರಾ ಇಷ್ಥ ಆಗ್ಬಿಟ್ಟಿದ್ದೀಯಾ . ಇಷ್ಟ ಅನ್ನೋದಕ್ಕಿಂತ ನೀನು ನಂಗೆ ಬೇಕು ಅಷ್ಟೆ ! ಇಲ್ಲಾಂದ್ರೆ ನಿಮ್ಹಾನ್ಸಲ್ಲಿ ಬೆಡ್ ಬುಕ್ ಮಾಡಿಡು.  
    ಹೇಳು  ನೀನು ನನ್ನ ಹೇಗೆ ಯಾವ ರೀತಿ ಎತ್ತಾಕ್ಕೊಂಡು ಹೋಗ್ತೀಯಾ ? ಯಾಕಂದ್ರೆ ಅಪ್ಪ ಅಮ್ಮ ಇಬ್ರೂ ಈ ಮದ್ವೆಗೆ ಒಪ್ಗೆ ಕೊಡೋಲ್ಲ . 100 % ಸತ್ಯ ಕಣೋ.. ಅದಿಕ್ಕೆ ಒಂದು ಒಳ್ಳೆ ದಿನ ನೋಡಿ ಒಳ್ಳೆ ಪ್ಲ್ಯಾನ್ ಮಾಡಿ ಓಡಿ ಹೋಗೋಣ... ಇನ್ನು  ನಂಗೆ ತಡೆಯೋಕ್ಕಾಗೋಲ್ಲ ಕಣೋ.... ನಿನ್ನನ್ನ ಬಿಟ್ಟು ನಂಗೆ ಒಂದ್ನಿಮಿಷಾನೂ ಇರೋಕ್ಕೆ ಆಗೋಲ್ಲ 
   ಬಹುಷಃ ಈ ವರ್ಷ ರಿಸಲ್ಟ್ ಬಂದಕೂಡ್ಲೇ ನಾನು ನಿನ್  ಜೊತೆಗೆ ಬರೋದೇ ಸರಿ ಅನ್ಸುತ್ತೆ. ಯಾಕಂದ್ರೇ ಒಂದೇ ಒಂದು ವಾಕ್ಯಾನೂ ಮೈಂಡ್ ಗೆ ಹೋಗೋಲ್ಲ ಕಣೋ. ಆಗ ಅಪ್ಪ ಅಮ್ಮ ಕೇಳ್ತಾರೆ. ನಾನು ನಿನ್ ಹೆಸ್ರು ಹೇಳ್ತೀನಿ ಅಷ್ಟೇ..ನೀನ್ ಹೀರೋ ಥರಾ ಬಂದು ನನ್ನ ಎತ್ತಾಕ್ಕೊಂಡ್ ಹೋಗ್ತೀಯ ಅಷ್ಟೇ.

Thursday, July 26, 2012

ನಾಟಕದ ಪ್ರೀತಿ

ಏ ಹುಡುಗೀ !

ಅಬ್ಬ ! ಅದೆಂಥಾ ಪ್ರೀತಿಯ ನಾಟಕವಾಡಿ ನನ್ನ ಜೀವನವನ್ನು ಹಿಂಡಿ ಹಿಪ್ಪೆ ಮಾಡಿದೆಯೆ ಹುಡುಗೀ ?

ಅಸಲಿ ನಿನ್ನನ್ನು ಹುಡುಗಿ ಎನ್ನಲೂ ನನ್ನ ನಾಲಿಗೆ ಬರುವುದಿಲ್ಲ. ಅಂತಹಾ ಆರದ ಗಾಯ ಮಾಡಿಬಿಟ್ಟೆಯಲ್ಲೇ! ಎಂದಿಗೂ ಮರೆಯದ, ಜೀವಮಾನವಿಡೀ ದುಃಖಿಸುವ ನಾಟಕ ಆಡಿಬಿಟ್ಟೆಯಲ್ಲೇ .

ಅಂತಹಾ ತಪ್ಪು ನಾನೇನು ಮಾಡಿದ್ದೆ? ಅಥವಾ ಹಿಂದಿನ ಜನುಮದಲ್ಲೇನಾದರೂ ನಿನ್ನ ಪ್ರೀತಿಗೆ ಧಿಕ್ಕರಿಸಿ ನಿನಗೆ ನಾನು ಮೋಸ ಮಾಡಿದ್ದೆನಾ? ಅಥವಾ ನನ್ನನ್ನು ಪ್ರೀತಿಯ ಹುಚ್ಚಲ್ಲಿ ಸಾಯಿಸಲೆಂದೇ ನನ್ನನ್ನು ಪ್ರೀತಿಸುವ ನಾಟಕವಾಡಿದೆಯಾ? ಯಾವುದನ್ನೂ ಆಲೋಚಿಸುವ ಸ್ಥಿತಿಯಲ್ಲಿ ನಾನಿಲ್ಲ ಕಣೇ

ನೀನಾಗೇ ಬಂದು ನನ್ನನ್ನು ಪ್ರೀತಿಸುತ್ತಿದ್ದೀನಿ ಎಂದು ಹೇಳಿದಾಗ..... ಜೀವಮಾನವಿಡೀ ನಿನ್ನ ದಾಸಿಯಾಗಿ ಇರುತ್ತೇನೆ.... ನಿನ್ನ ಪ್ರೀತಿಯೊಂದನ್ನು ಕೊಡು ಎಂದು ಅಂಗಲಾಚಿದಾಗ........ನಾನು ನೋಡುತ್ತಿರುವುದು ಕನಸೋ ನನಸೋ ತಿಳಿಯದಾದೆನು.

ಯಾರ ತಂಟೆಯೂ ಬೇಡ ಎಂದು ನನ್ನ ಪಾಡಿಗೆ ನಾನಿದ್ದೆ ಕಣೇ. ಆದರೆ ನನ್ನ ಹೃದಯದಲ್ಲಿ ನೀನೆಬ್ಬಿಸಿದ ಬಿರುಗಾಳಿ..... ಅಬ್ಬ ....  ನಿನ್ನ ಮರಳು ಮಾತಿಗೆ, ಮಾತಿನ ಮೋಡಿಗೆ, ಅದೆಲ್ಲಕ್ಕಿಂತ ನಿನ್ನ ಹುಚ್ಚೆಬ್ಬಿಸುವ ನಗೆಗೆ..ಸೋತುಬಿಟ್ಟೆ ಕಣೇ.......

ಒಂದೇ ಒಂದು ಸಾರಿ ಸರಿಯಾಗಿ ಯೋಚಿಸಿದ್ದರೆ,,,,, ಸಾಕಿತ್ತು ಕಣೇ......... ಇಂದು ನಾನು ಹುಚ್ಚನಂತಾಗುತ್ತಿರಲಿಲ್ಲ........
ಅಂದು ಯೋಚಿಸದೇ ತೆಗೆದುಕೊಂಡ ನಿರ್ಧಾರಕ್ಕೆ ಇವತ್ತು ನನ್ನ ಅಸ್ತಿತ್ವವನ್ನೇ ನಾಶಮಾಡಿಬಿಟ್ಟೆಯಲ್ಲೇ ?
ನನ್ನ ಆತುರದ ನಿರ್ಧಾರಕ್ಕೆ, ನನ್ನ ಹುಂಬತನಕ್ಕೆ ಸರಿಯಾದ ಪಾಠವನ್ನೇ ಕಲಿಸಿದೆಯಲ್ಲ ಹುಡುಗೀ....
ಕೊನೆಯಲ್ಲಿ ನನ್ನಿಂದ ಆದ ಪ್ರಮಾದವನ್ನಾದರೂ ತಿಳಿಸಿ ಹೇಳಬಹುದಿತ್ತಲ್ಲ ? ಅಥವಾ ಪ್ರೀತಿ ಮುರಿಯಲು  ಆಗಿರುವ ಕಾರಣವನ್ನಾದರೂ ತಿಳಿಸಬಹುದಿತ್ತಲ್ಲಾ ? ಅಂತಹ ತಪ್ಪು ನಾನೇನು ಮಾಡಿದೆ ಹುಡುಗೀ ?
ಇಂದಿಗೂ ನನ್ನ ಮನದಲ್ಲಿ ದುಂಬಿಯಂತೆ ಕೊರೆಯುತ್ತಿದೆ........ ಒಂದಲ್ಲಾ ಒಂದು ದಿನ ನೀನು ಅದಕ್ಕೆ ಉತ್ತರ ಕೊಡುತ್ತೀಯೇನೋ ಎಂದು ಕಾಯುತ್ತಲೇ ಇರುವೆ ಹುಡುಗೀ ........



Friday, June 29, 2012

        ಗೆಳತೀ ನಿನ್ನನ್ನು ಮೋಸಗಾತಿ ಎನ್ನಲಾ? ನಂಬಿಕಸ್ಥೆ ಎನ್ನಲಾ? ನನ್ನನ್ನು ಗೋಳು ಹುಯ್ದು ಕೊಳ್ಳಲೆಂದೇ ನೀನು ಹುಟ್ಟಿದವಳೆನ್ನಲಾ? ದಿನ ದಿನವೂ ನಿನ್ನ ರೂಪದಿಂದ, ಮಾತಿನಿಂದ, ನೋಟದಿಂದ, ವಯ್ಯಾರದಿಂದ ನನ್ನನ್ನು ಮರಳು ಮಾಡಲೆಂದೇ ಭೂಮಿಯಲ್ಲಿ ಅವತರಿಸಿದವಳೆನ್ನಲಾ? ಎನೆನ್ನಲಿ ಗೆಳತೀ ?

       ದೀರ್ಘ ಗೆಳೆತನ ಎಂಬುದು ಪ್ರೇಮ. ಪ್ರೀತಿಯಾಗಿ ಮಾರ್ಪಡುತ್ತದೆ ಎಂದು ಯಾರೋ ಹೇಳಿದ ನೆನಪು . ಆದರೆ ಗೆಳತೀ ನನ್ನ ನಿನ್ನ ಪರಿಚಯವೇ ಸರಿಯಾಗಿ ಇಲ್ಲದೇ, ಪರಿಚಯ ಮಾಡಿಕೊಳ್ಳಲು ಬಂದಾಗಲೂ ಧಿಕ್ಕರಿಸಿ ಮುಖ ತಿರುಗಿಸಿಕೊಂಡು ಹೋಗುತ್ತಿದ್ದ ನಮಗೆ ದೀರ್ಘ ಗೆಳೆತನ ಎಲ್ಲಿಂದ ಆಗುತ್ತದೆ ಗೆಳತೀ.
       
       ನಾನೆಷ್ಟೋ ಬಾರಿ ನಿನ್ನನ್ನು ನೋಡಿ ನಿನ್ನ ಹಿಂದೆ ಬಿದ್ದರೂ, ನಿನ್ನ  ಕೈಯಲ್ಲಿ ಕಪಾಳ ಮೋಕ್ಷ ಮಾಡಿಸಿಕೊಂಡರೂ, ನಿನ್ನ ಮನೆಯವರಿಂದ ಬಯ್ಗುಳ ತಿಂದರೂ, ಅದೇಕೋ ನಿನ್ನನ್ನು ನೋಡದೇ ಇರಲಾಗಲಿಲ್ಲವಲ್ಲ ಗೆಳತೀ.

      ಆದರೆ,  ಅದೊಂದು ! ನನ್ನ ನಿನ್ನ  ಆ ಅನಿರೀಕ್ಷಿತ ಭೇಟಿಯ ದಿನ ಆ ನಿನ್ನ ಮುಖಭಾವನೆಗೆ ಏನಿತ್ತು ಅರ್ಥ ? ಜೀವಮಾನವಿಡೀ ನನ್ನ ಜೊತೆಯಲ್ಲೇ ಬದುಕಿ ಬಾಳಬೇಕೆಂಬೆ ಬಯಕೆಯಾ ? ನನ್ನ ಎದೆಯಲ್ಲಿ ನಿನ್ನ ಜೀವನವನ್ನು ಹುದುಗಿಸಿಡುವ ಹುನ್ನಾರವಾ? ನನ್ನ ಬಾಳಲ್ಲಿ ನಿನ್ನೊಬ್ಬಳನ್ನು ಬಿಟ್ಟು ಬೇರಾರೂ ಬರಬಾರದೆಂಬ ಕಠಿಣ ನಿರ್ಧಾರವಾ? ತಿಳಿಯದಾಯಿತು ಗೆಳತೀ.. . .


     ರಾತ್ರಿ ಇಡೀ ನಿನ್ನದೇ ಎನೇನೋ ನೆನಪುಗಳು. ಎಲ್ಲೆಲ್ಲೂ ನಿನ್ನ ಹೆಸರನ್ನೇ ಬರೆಯಬೇಕೆಂಬ ಬಯಕೆ. ಹೆತ್ತಮ್ಮನಿಗೇ ಸುಳ್ಳು ಹೇಳುವ ಪರಿಸ್ಥಿತಿ .ಛೆ ಗೆಳತೀ ಅದೇನು ಹುಚ್ಚು ಹಿಡಿಸಿದೆಯೇ ?

       ಆದರೂ ನಾನು ಕೇಳಿದ ಮಾತು ನಿನಗೂ ಹೀಗೇ ಆಗುತ್ತದೆಯಾ ಎಂದು. ಹುಂ! ಬುದ್ಧಿವಂತೆ ಕಣೆ ನೀನು.ಮಾತಿನಲ್ಲಿ, ಜಾರಿಕೊಂಡು ಬಿಟ್ಟೆ.ಅಂದು ಅರ್ಥವಾಗದೇ ಹೋಯಿತು ನಿನ್ನ ನಗು
    
     At least ನಿನ್ನ ನಗುವಿಗಿರುವ ಅರ್ಥವನ್ನಾದರೂ ಅರ್ಥ ಮಾಡಿಕೊಳ್ಳುವ ವ್ಯವಧಾನ ನನಗಿಲ್ಲದೇ ಹೋಯಿತು ಗೆಳತೀ.

    ನಿನ್ನ ಜೀವಕ್ಕಿಂತ ಹೆಚ್ಚಾಗಿ ನನ್ನನ್ನು ನೆಚ್ಚಿಕೊಂಡಿದ್ದೀಯಾ ಎಂದು. ಒಮ್ಮೆಯಾದರೂ ನೀನು ನನ್ನನ್ನು ಇಷ್ಟಪಟ್ಟ ವಿಷಯ ತಿಳಿಸಿದೆಯಾ ? ನಿನಗೆ ಮೊದಲೇ ಗೊತ್ತಿತ್ತಾ ಹುಡುಗೀ ನೀನು ನನ್ನನ್ನು ಮದುವೆಯಾಗುವುದು? ದೇವರು ನಿನಗೊಬ್ಬಳಿಗೇ ಕಿವಿಯಲ್ಲಿ ಪಿಸುಗುಟ್ಟಿದ್ದನಾ ?  ಇದನ್ನೆಲ್ಲಾ ನಮ್ಮ ಮದುವೆಯ ಮೊದಲ ರಾತ್ರಿ ಕೇಳಬೇಕೆಂದುಕೊಂಡಿದ್ದೆ ಕಣೇ. ಆದರೆ ಅದ್ಹೇಗೆ ಕಳೆಯಿತೋ ನಮ್ಮಿಬ್ಬರ ಮಿಲನದ ಮೊದಲ ರಾತ್ರಿ. ಅದನ್ನೆಲ್ಲ ಕೇಳುವ ತಾಳ್ಮೆಯೇ ಇರಲಿಲ್ಲ ಕಣೇ. ಇನ್ನು ಅವನ್ನು ಕೇಳುವ ಪ್ರಮೇಯವೇ ಬೇಡ ಅಲ್ಲವಾ ಪ್ರಿಯೇ ?

Wednesday, July 20, 2011

ಜಿಟಿ ಜಿಟಿ ಮಳೆಯಲಿ ಮೀಯೋಣ ಬನ್ನಿ


ಓ ನನ್ನ ಮುದ್ದಿನ ಗೆಳೆಯ ಗೆಳತಿಯರೇ

ದೂರದ     ಸಿಟಿಯಲ್ಲಿ ಕುಳಿತು, ವಾಹನಗಳ ಕಿರಿ ಕಿರಿಯಲ್ಲಿ, 
ಟ್ರಾಫಿಕ್ ಜಾಮ್ ಎಂಬ ಪೆಡಂಭೂತದ ಮದ್ಯೆ, 
ಜನಸಂದಣಿಯ  ರಗಳೆಯಲ್ಲಿ,
ವಾಹನಗಳ ಹೊಗೆಯನ್ನು ಸಹಿಸದೆಯೂ ಸಹಿಸಲೇಬೇಕಾಗಿರುವ ದುರ್ವಿಧಿಯಲ್ಲಿ,
ಕಿವಿ ಗಡಚಿಕ್ಕುವ ಶಬ್ಧಗಳ ಸಂತೆಯಲ್ಲಿ,
ಜೀವನಕ್ಕಾಗಿ ದುಡಿದು ದಣಿಯಲೇಬೇಕಾದ ಸಂದಿಗ್ಧತೆಯಲ್ಲಿ, 
ಕುಳಿತಿರುವ    ಮಹಾನಗರಿಯ   ಓ ನನ್ನ   ಸ್ನೇಹಿತರೇ

ನಿಮಗಿದೋ ಸುಂದರ ಮಲೆನಾಡಿಗೆ ಸ್ವಾಗತ

 ಮಲೆಗಳ ನಾಡು, ವಿಂದ್ಯ ಪರ್ವತಗಳ ತಪ್ಪಲು ಈ ಮಲೆನಾಡು, 
ಬರೋಬ್ಬರಿ ತಿಂಗಳುಗಟ್ಟಲೆ ಮಳೆ ಗಿಜಿಗುಡುವ    ನಾಡು ಈ ಮಲೆನಾಡು,

ಮುಂಜಾನೆಯೆನ್ನದೆ, ರಾತ್ರಿಯೆನ್ನದೆ ದಟ್ಟ ಆವಿಯನ್ನು ಹೊರಸೂಸುತ್ತಾ ಇಡೀ ಪ್ರಕೃತಿಯನ್ನೇ ತನ್ನ ಮಡಿಲೊಳಗೆ ಹಾಕಿಕೊಂಡು ನೋಡುಗರಿಗೆ ನಿರಾಶೆಯ ಜೊತೆಗೆ ರಸದೌತಣವನ್ನು ನೀಡುವುದೇ ಈ ಮಲೆನಾಡು .

ಒಮ್ಮೆ ಬಂದು ಈ ಪ್ರಕೃತಿಯ ಸೊಬಗನ್ನು ಕಣ್ಣಾರೆ ಕಂಡು, ಮನಸೂರೆಗೊಂಡು, ಈ ನಮ್ಮ ಮಲೆನಾಡಿನ    ಸೊಬಗನ್ನು, ಸುಂದರ ಪ್ರಕೃತಿಯನ್ನು ನೋಡಿ ಹೊಟ್ಟೆಕಿಚ್ಚು ಪಟ್ಟು, 

ನಿಮ್ಮಮನಸಿನಲ್ಲಿ ಅಚ್ಚಳಿಯದ ನೆನಪನ್ನು ಹೊತ್ತುಕೊಂಡು ಮತ್ತದೇ ನಿಮ್ಮ ಮಾಮೂಲಿ ಅನಿವಾರ್ಯ  ವಾಸಸ್ಥಾನಕ್ಕೆ ಒಲ್ಲದ ಮನಸ್ಸಿನಿಂದ   ಹೋಗಿ ಬನ್ನಿ




Monday, January 17, 2011

ಹೀಗೊಂದು ಪ್ರೇಮ ಚಿತ್ರ ಕಥೆ

ಹೀಗೊಂದು ಪ್ರೇಮ ಚಿತ್ರ ಕಥೆ

ಒಂದಾನೊಂದು ಕಾಲದಲ್ಲಿ ಆರಂಭವಾದ ಅಪರಂಜಿಯಂತಹ ನಮ್ಮ ಪ್ರೀತಿ ಪ್ರೇಮ ಪ್ರಣಯ, ಹೂವು ಮುಳ್ಳು ಎಂಬಂತೆ ಪ್ರೀತಿ ಬೆಸುಗೆಯನ್ನು ಬೆಸೆದಿದೆ.

ಅಂದು ಬಿಳಿಗಿರಿಯ ಬನದಲ್ಲಿ ಹಸಿರು ಬೆಟ್ಟದ ಮೇಲೆ ನಾ ನಿನ್ನ ಪ್ರೀತಿಸುವೆ, ನೀನು ಪ್ರೀತಿಸಿ ನೋಡು ಎಂದು ನಾನು ಹೇಳಿದೆ.

ಕನಸುಗಾರನ ಬೊಂಬಾಟ್ ಅರಮನೆಯಿಂದ ಅರಸುವಂತೆ ಬಂದು  ಯುಗಾದಿಯ ಉಲ್ಲಾಸ ಉತ್ಸಾಹದಿಂದ ಹೊಂಬಿಸಿಲಿನಲ್ಲಿ ಚಂದ್ರಮುಖಿ ಪ್ರಾಣಸಖಿ  ಮುಸ್ಸಂಜೆಯ ಮಾತಿನಲ್ಲಿ ಪ್ರೀತ್ಸೇ ಎಂದು ಬಂದೆ,

ಬಯಲು ದಾರಿಯಲ್ಲಿ ವೀರ ಮದಕರಿಯಾಗಿ ಸೋಲಿಲ್ಲದ ಸರದಾರನಾಗಿ ಬಂಗಾರದ ಮನುಷ್ಯನಾಗಿ ಸತ್ಯ ಹರಿಶ್ಚಂದ್ರನಂತೆ ಗಂಗೇ ಬಾರೇ ತುಂಗೇ ಬಾರೇ ಎಂದು ಹೇಳಿದೆ.

 ಅಂದು ನಾನು ಏಕಾಂಗಿ ಯಾಗಿ ಬಂದು, ಚಂಡಿ ಚಾಮುಂಡಿಯಾಗಬೇಡ. ಪ್ರೀತ್ಸೋದ್ ತಪ್ಪಾ?? ನೀನು  ನನ್ನ ಕಣ್ಣು ತೆರೆಸಿದ ಹೆಣ್ಣು  ಎಂದು ಉಸುರಿದೆ.

 ಆಗ ಒಂದೇ ಉಸಿರಿಗೆ ಕಣ್ತೆರೆದು ನೋಡು ಎಂದು ನೀನು ಅಂಗಲಾಚಿದ ಆ ದಿನ 

 ಗೆಳತೀ ಅಂದು ನೀನು ಹಾಡಿದ ಹಾಡು ಬಾನಲ್ಲು ನೀನೆ  ಭುವಿಯಲ್ಲು ನೀನೆ.
ಕಾಶ ಗಂಗೆಯಲಿ ಗಾಳಿಪಟವಾಗಿ ಧ್ರುವತಾರೆಯಾಗಿ  ಒಂದಾಗೋಣ ಬಾ, ಅರುಣ ರಾಗ ಹಾಡೋಣ ಎಂದು ನೀನು ಹೇಳಿದ ದಿನವೇ  ನಾನು ಅಕ್ಷರಷಃ ನಂಬದಾದೆನು.

ಆದರೆ ನಾನಂದು ಕೊಂಡೆ, ಇದು ಸ್ನೇಹಾನಾ ಪ್ರೀತೀನಾ?? ಸ್ನೇಹ ಲೋಕವೋ ಪ್ರೇಮಲೋಕವೋ??  ಅಂದು ನಾನು ಅರಿಯದಾದೆನು.

ನಾನು ಇದು ಕನಸೋ ನನಸೋ ಎಂದು ಕಕ್ಕಾ ಬಿಕ್ಕಿಯಾದೆ.

ಮತ್ತೊಂದು ದಿನ ಯಾರ ಭಯವೂ ಇಲ್ಲದೇ ಎಡಕಲ್ಲು ಗುಡ್ಡದ ಮೇಲೆ  ನಿಂತುಕೊಂಡು  ನಾ ನಿನ್ನ ಬಿಡಲಾರೆ ನಾ ನಿನ್ನ ಮರೆಯಲಾರೆ .

ನಮ್ಮಿಬ್ಬರದು ಜನ್ಮ ಜನ್ಮದ ಅನುಬಂಧ  ಎಂದು ನೀನು  ಕೂಗಿ ಕೂಗಿ  ಹೇಳಿ ನನಗೆ ಹೊಸಬೆಳಕು ನೀಡಿದೆ.

ನೆನಪಿರಲಿ ಗೆಳತೀ ಆಪ್ತ ಮಿತ್ರನಂತೆ ನನ್ನ ಮನಸಾರೆಯಾಗಿ ಮುಂಗಾರು ಮಳೆಯಲ್ಲಿ ಮುತ್ತಿನ ಹಾರ ಹಿಡಿದು ಮದುವೆ ಆಗೋಣ ಬಾ ಎಂದು ಹೇಳಿದೆ ನಾನು.

ನಾವಿಬ್ಬರೂ ಎರಡು ನಕ್ಷತ್ರದ ಎರಡು ರೇಖೆಗಳು. ನೀ ಬರೆದ ಕಾದಂಬರಿಯಲ್ಲಿ ಶೃಂಗಾರ ಕಾವ್ಯವಾಗಿ ನೀನು ಹೊಗಳಿದ ನೀಲಾಂಬರಿ ಕನಕಾಂಬರಿ ಕರ್ಪೂರದ ಗೊಂಬೆ ಎಂಬ ಶಬ್ಧಗಳು ಇಂದಿಗೂ ನನ್ನ ಕರ್ಣದಲ್ಲಿ ಬಂಧನವಾಗಿದೆ ಎಂದು ನೀನು ಹೇಳಿದಾಗ ಧನ್ಯತಾ ಭಾವವನ್ನು ಅನುಭವಿಸಿದವನು ನಾನು.

 ಕೊನೆಗೂ ಚಕ್ರವ್ಯೂಹ ಭೇದಿಸಿ ತಾಳಿ ಕಟ್ಟುವ ಶುಭ ವೇಳೆಯಲ್ಲಿ ತವರು ಮನೆ ಉಡುಗೊರೆಯಾಗಿ ನಿನ್ನ ಅಪ್ಪ ಅಮ್ಮ ಹರಸಿದ ಶಬ್ಧ ಜನುಮದ ಜೋಡಿಯಾಗಿ.

ಇದು ಜನ್ಮ ಜನ್ಮದ ಅನುಬಂಧವಾಯಿತು. ಪ್ರಿಯೇ ನಿನಗೆ ನಾನು, ನನಗೆ ನೀನು ಎಂಬಂತೆ ನಾವಿಬ್ಬರು ನಮಗಿಬ್ಬರು ಎಂದು ಹಾಡು ಗುನುಗುತ್ತಾ ಮಧುಚಂದ್ರಕ್ಕೆ ಹೊರಟೇ ಬಿಟ್ಟೆವು. ಅಚ್ಚಳಿಯದ ನನಸು ಅದೇ ಅಲ್ಲವೇ ಪ್ರಿಯೇ???


ಜಗದೀಶ ಶರ್ಮ.

Saturday, January 8, 2011

ಬಗೆ ಮುಂದೆ ಗತಿಯೆಂತೊ


ಸರಕಾರ ಹರಿಗೋಲು ತೆರೆಸುಳಿಗಳತ್ತಿತ್ತ |

ಕುಡಿದ ಕೆಲವರು ಹುಟ್ಟು ಹಾಕುತಲಿಹರು |

ಜನ ಹುಚ್ಚೆದ್ದು ಕುಣಿಯುತಿಹರು |

ಉರುಳಿಬೀಳದಚ್ಚರಿಯೊ ಮಂಕುತಿಮ್ಮ || 

ಎಂಬ ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದ ನುಡಿ ಅಕ್ಷರಷಃ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನ ಸರಕಾರ ಹುಚ್ಚರ ಸಂತೆಯಾಗಿದೆ. ಕಾಳ ಸಂತೆಯಲ್ಲಿ ಸಾಮಾನುಗಳನ್ನು ಕೊಳ್ಳುವಂತೆ ಯಾವುದೇ ಪಕ್ಷದವರನ್ನೂ ಕೋಟಿಗಟ್ಟಲೇ ಹಣ ಕೊಟ್ಟು ಕೊಂಡುಬಿಡುವಷ್ಟರ ಮಟ್ಟಿಗೆ ಇಂದಿನ ರಾಜಕೀಯ ಬೆಳೆದಿದೆ.       ಇಲ್ಲಿಯವರೆಗೆ ತೆರೆಮರೆಯಲ್ಲಿ ನಡೆಯುತ್ತಿದ್ದ ಲಂಚದ ವ್ಯವಹಾರ ಇಂದು ಪಾರ್ಲಿಮೆಂಟ್ ವರೆಗೂ ಬಂದಿದೆಯೆಂದರೆ ನಾವೆಷ್ಟು ಧನ್ಯರು???


     ಇಡೀ ದೇಶದ 115 ಕೋಟಿ ಜನರು ಇವರ ಲೆಕ್ಕಕ್ಕೆ ಸಿಗುವುದೇ ಇಲ್ಲ. ಕೇವಲ 541 ಜನ ಸಂಸದರು 115 ಕೋಟಿ ಜನರನ್ನು ಆಟ ಆಡಿಸುತ್ತಿರುವುದು ನಮ್ಮ ಬೇಜವಾಬ್ಧಾರಿತನಕ್ಕೆ ಸಾಕ್ಷಿಯಾಗಿದೆ. ನಮ್ಮ ದೇಶದ ಜನರ ನಿರ್ಲಕ್ಷತನಕ್ಕೆ ಸಾಕ್ಷಿಯಾಗಿದೆ. ಯಾವುದನ್ನೂ ಧಿಕ್ಕರಿಸುವ ಸ್ಥಿತಿಯಲ್ಲಿ ನಾವಿಲ್ಲ. ಎಲ್ಲವನ್ನೂ ಕೇವಲ 541 ಜನರು ಹೇಳಿದ ಹಾಗೆ, ಅವರಾಡುವ ನಾಟಕಗಳನ್ನೆಲ್ಲಾ ನೋಡುತ್ತಾ ಸುಮ್ಮನೆ ಕೈಕಟ್ಟಿ ಕೂರುವಂತಾಗಿದೆ. 


    ಎಲ್ಲೋ ಅಲ್ಲೊಂದು ಇಲ್ಲೊಂದು ಪ್ರತಿಭಟನೆ ಮುಷ್ಕರಗಳು ನಡೆಯುತ್ತವೆ. ಮಾರನೇ ದಿನ ಮತ್ತೆ ಎಂದಿನಂತೆ ಜಿವನ ಶುರುವಾಗುತ್ತದೆ. ಇಷ್ಟೆಲ್ಲಾ ನಡೆದರೂ ಮತ್ತೆ ಮತವನ್ನು ಹಾಕುವ ನಮ್ಮ ಪಾಡು ಯಾರಿಗೆ ಹೇಳುವುದು? 


    ಕೇವಲ ಅಧಿಕಾರಕ್ಕಾಗಿ 5 ವರುಷಗಳಿಗೊಮ್ಮ  ನಮ್ಮತ್ತ ಮುಖ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಜನ ಪ್ರತಿನಿಧಿಗಳಿಗೆ ನಾವು ಮತವನ್ನು ಹಾಕದೇ ನೇರವಾಗಿ ಅವರ ಕೈಗೆ  ತಮ್ಮಲ್ಲಿರುವಷ್ಟು ಹಣವನ್ನು ಕೊಟ್ಟು  ಮತ ಕೇಳಬೇಡಿ ಎಂದು ಧಿಕ್ಕರಿಸಿದರೆ ಈ ದೇಶದ ಪರಿಸ್ಥಿತಿ ಸುಧಾರಿಸಬಹುದೇ???? 


    ನಾವು ಮುಂದೆ ಬದುಕಲೇ ಬೇಕೆಂದರೆ ಏನು ಮಾಡಲೇಬೇಕೆಂಬ ನಿಬಂಧನೆಯನ್ನು ಹಾಕಿಕೊಳ್ಳುವುದು ಉತ್ತಮವಲ್ಲವೇ?? 


       ಇಂದು ಸರಕಾರಿ ಆಸ್ತಿಯನ್ನು ಕಬಳಿಸುತ್ತಿರುವ ನಾಯಕರು ಮುಂದೊಂದು ದಿನ ನಮ್ಮ ಆಸ್ತಿಗೇ ಕೈ ಹಾಕಲಾರರು ಎಂಬ ನಂಬಿಕೆಯನ್ನ ಹೇಗೆ ಇಟ್ಟುಕೊಳ್ಳಬಹುದು?? 




ಯುವಕರೇ ಏಳಿ ಎದ್ದೇಳಿ.. ಇನ್ನಾದರೂ ನಮ್ಮ ತನವನ್ನು ಉಳಿಸಿಕೊಳ್ಳುವತ್ತ ಹೋರಾಡೋಣ.. ಬದುಕಿನ ಸಾರ್ಥಕತೆಯತ್ತ ಮುಖ ಮಾಡೋಣ

      ಹಾಗೆ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ 

ಜಗವಿಹುದನಾರಿಯದು ಮೊದಲಿಲ್ಲ ಕೊನೆಯಿಲ್ಲ|

ಯುಗದಿಂದ ಯುಗಕೆ ಹರಿವುದು ಜೀವನದಿವೊಲ್ |

ಅಘಪುಣ್ಯಗಳ ಬೇರ್ಗಳೆಂದಿನಿಂ ಬಂದಿಹವೂ | 

ಬಗೆ ಮುಂದೆ ಗತಿಯೆಂತೊ - ಮರುಳ ಮುನಿಯ || 

 ನಮ್ಮ ಪರಿಸ್ಥಿತಿ ಹೀಗೆ  ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.. ಮುಂದಿನ ಻    ವ್ಯವಸ್ಥೆ ಹೇಗೆ ಎಂದು ಬಲ್ಲವರಾರು???

                                           ಜಗದೀಶ ಶರ್ಮ. 

Friday, January 7, 2011

ಮನಸಿನ ಭಾವನೆ

ಸ್ನೆಹಿತರೇ,
ನನ್ನ ಮನಸ್ಸಿನಲ್ಲಿ ಹಲವಾರು ಆಲೋಚನೆಗಳು, ಉತ್ಸಾಹಗಳು, ಇನ್ನೂ  ಏನೇನೋ ಹುಚ್ಚು ಕಲ್ಪನೆಗಳನ್ನು ನನ್ನ ಈ ಬ್ಲಾಗ್ ನಲ್ಲಿ ಹಾಕಿರುತ್ತೇನೆ.
ತಮ್ಮ ಻ಅನಿಸಿಕೆ, ಅಭಿಪ್ರಾಯಗಳು ಹೇಗೇ ಇದ್ದರೂ ನೇರವಾಗಿ ನಿಷ್ಠೂರವಾಗಿ ಕಳುಹಿಸಿದರೆ ಅದಕ್ಕಿಂತ ಸಂತೋಷ ನನಗೆ ಬೇರೆ ಇಲ್ಲ.
ಗೆಳೆಯರೇ
ಇದೋ ನನ್ನ ಮನಸಿನ ಭಾವನೆಗಳನ್ನು 
ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.